ಕೈಗಾರಿಕೆಗಳ ಸಂಯುಕ್ತ ಸಂಘಗಳು

ಕೈಗಾರಿಕೆಗಳು ಸ್ವಯಂ ಇಚ್ಛೆಯಿಂದ ರಚಿಸಿಕೊಂಡ ಸಂಘಗಳು (ಫೆಡರೇಷನ್ ಆಫ್ ಇಂಡಸ್ಟ್ರೀಸ್). ಇವು ಉದ್ಯಮಿಗಳ ಸಂಘಗಳು. ಒಂದು ರಾಷ್ಟ್ರದ ಕೈಗಾರಿಕಾ ಸಂಘಗಳು ಒಂದಾಗಿ ರಚಿಸಿಕೊಂಡ ಸಂಯುಕ್ತಸಂಘಗಳು ರಾಷ್ಟ್ರೀಯ ಸಂಯುಕ್ತ ಸಂಘಗಳೆನಿಸಿಕೊಳ್ಳುತ್ತವೆ. ಒಂದು ನಿರ್ದಿಷ್ಟ ಕೈಗಾರಿಕೆಯ ವಿವಿಧ ಸಂಘಗಳು ಸೇರಿ ಸಂಯುಕ್ತ ಸಂಘವೊಂದನ್ನು ರಚಿಸಿಕೊಳ್ಳಬಹುದು. ಉದಾಹರಣೆ: ಮುಂಬಯಿಯ ಭಾರತೀಯ ಹತ್ತಿಗಿರಣಿಗಳ ಸಂಘ ಮತ್ತು ಭಾರತದ ವಿದ್ಯುತ್ ಉದ್ಯಮಗಳ ಸಂಘ. ಇಡೀ ಕೈಗಾರಿಕೆಗೆ ಅನ್ವಯಿಸುವಂತೆ ಅದು ರಚಿತವಾಗಬಹುದು. ಉದಾಹರಣೆ: ಅಖಿಲ ಭಾರತ ತಯಾರಿಕೆಗಾರರ ಸಂಘ. ಆಮದು ಹತೋಟಿ, ರಫ್ತಿಗೆ ಪ್ರೊತ್ಸಾಹ, ಪರವಾನೆ, ಧಾರಣೆ, ಮಾರುಕಟ್ಟೆ, ಉತ್ಪಾದನೆ, ಸಮನ್ವಯೀಕರಣ, ತೆರಿಗೆ, ಸಂಶೋಧನೆ ಮುಂತಾದ, ಕೈಗಾರಿಕೆಗಳಿಗೆ ವಿಶಾಲವಾಗಿ ಅನ್ವಯಿಸಬಹುದಾದ, ಸಮಸ್ಯೆಗಳನ್ನು ಪರಿಹರಿಸುವುದೂ ಈ ಬಗ್ಗೆ ಅಧಿಕಾರಯುತವಾಗಿ ಮಾತಾಡಬಲ್ಲ ಸಮಷ್ಟಿ ಶಕ್ತಿಗಳಿಸುವುದೂ ಕಾರ್ಮಿಕರೊಂದಿಗೆ ಪರಿಣಾಮಕಾರಿಯಾಗಿ ಕರಾರು ಮಾಡಿಕೊಳ್ಳುವುದೂ ಈ ಸಂಘದ ಮುಖ್ಯ ಉದ್ದೇಶ.

ಹಲವು ರಾಷ್ಟ್ರಗಳ ಸಂಘಗಳು ಕೂಡಿ ಅಂತರರಾಷ್ಟ್ರೀಯ ಕೈಗಾರಿಕಾ ಸಂಯುಕ್ತ ಸಂಘಗಳನ್ನು ಏರ್ಪಡಿಸಿಕೊಂಡಿವೆ. ಸ್ವಿಟ್ಜರ್ಲೆಂಡಿನ ಜóೂರಿಚ್‍ನಲ್ಲಿರುವ ಹತ್ತಿಜವಳಿ ಹಾಗೂ ತತ್ಸಂಬಂಧ ಜವಳಿ ಗಿರಣಿಗಳ ಅಂತರರಾಷ್ಟ್ರೀಯ ಸಂಯುಕ್ತಸಂಘ, ಫ್ರಾನ್ಸಿನ ಪ್ಯಾರಿಸಿನಲ್ಲಿರುವ ಮೋಟಾರು ತಯಾರಿಕೆಗಾರರ ಅಂತರರಾಷ್ಟ್ರೀಯ ಖಾಯಂ ಮಂಡಳಿ, ಫ್ರಾನ್ಸಿನ ಲೈಯನ್ಸಿನ ಅಂತರರಾಷ್ಟ್ರೀಯ ರೇಷ್ಮೆ ಸಂಘ-ಇವು ಉದಾಹರಣೆಗಳು. ಕೈಗಾರಿಕೆ ಎದುರಿಸಬೇಕಾದ ಸಮಸ್ಯೆಗಳನ್ನು ಅಂತರರಾಷ್ಟ್ರೀಯ ಕ್ಷೇತ್ರದಲ್ಲಿ ಪರಿಹರಿಸಲು ಯತ್ನಿಸುವುದೇ ಇಂಥ ಸಂಘವನ್ನು ಸ್ಥಾಪಿಸುವುದರ ಉದ್ದೇಶ, ಸಂಶೋಧನೆ, ಉತ್ಪಾದನವಿಧಾನಗಳ ಪರೀಕ್ಷಣ ಹಾಗೂ ಶಿಷ್ಟೀಕರಣ, ನಿಯೋಗಗಳ ರಚನೆ, ಸಂಯುಕ್ತ ಒಪ್ಪಂದಗಳ ರಚನೆ, ಉದ್ಯೋಗ ಸಮಸ್ಯೆಗಳ ಪರಿಹಾರ, ಕಾರ್ಮಿಕ ದಕ್ಷತೆಯ ಪರಿಶೀಲನೆ-ಇವು ಕೆಲವು ಸಮಸ್ಯೆಗಳು. ಆದರೆ ವ್ಯಾವಹಾರಿಕವಾಗಿ ಯಾವ ಅಂತರರಾಷ್ಟ್ರೀಯ ಸಂಸ್ಥೆಯೂ ರಾಷ್ಟ್ರಪ್ರೇಮಕ್ಕಾಗಲಿ ರಾಷ್ಟ್ರಭದ್ರತೆಗಾಗಲಿ ಪ್ರತಿಯಾಗಿ ನಿಲ್ಲಲಾರದು. ಕೈಗಾರಿಕೆಯ ಕ್ಷೇತ್ರದಲ್ಲೂ ಅಂತರ ರಾಷ್ಟ್ರೀಯತೆ ಯಶಸ್ವಿಯಾಗಿದ್ದ ಪಕ್ಷದಲ್ಲಿ ಆಗ ಇಂದಿರುವಂಥ ಪರಿಸ್ಥಿತಿ ಇರುತ್ತಿರಲಿಲ್ಲ. ವಿವಿಧ ದೇಶಗಳು ಕೈಗಾರಿಕಾಭಿವೃದ್ಧಿಯ ನಾನಾ ಘಟ್ಟಗಳಲ್ಲಿ ಇರುತ್ತಿರಲಿಲ್ಲ, ಅಭಿವರ್ಧಿಸಿದ ಮತ್ತು ಅಭಿವೃದ್ಧಿಶೀಲ ದೇಶಗಳ ತಾರತಮ್ಯಗಳಿರುತ್ತಿರಲಿಲ್ಲ ವ್ಯಾಪಾರವಿಚಾರದಲ್ಲಿ ವಿಭೇದ, ಸುಂಕ ಪದ್ಧತಿ, ಹಸುಗೆ ಪದ್ಧತಿ, ಕೈಗಾರಿಕಾರಕ್ಷಣೆ ಮುಂತಾದವು ಇರುತ್ತಿರಲಿಲ್ಲ. ಅಂತರರಾಷ್ಟ್ರೀಯ ಸಂಘಗಳು ಪ್ರಪಂಚಶಾಂತಿಯ ಹಾಗೂ ಅಭಿವೃದ್ಧಿಯ ವಿಚಾರದಲ್ಲಿ ಶ್ರದ್ಧಾನ್ವಿತ ಆಸೆಯನ್ನು ಹುಟ್ಟಿಸಬಹುದು. ಆದರೆ ಅವು ಯುದ್ಧಾಪಾಯವನ್ನು ಎದುರಿಸುವ ವಿಚಾರದಲ್ಲಿ ಅಸಮರ್ಥಶಕ್ತಿಗಳು.									(ಜೆ.ಕೆ.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ